• +91 9448039075 / +91 9480576501
  • Deshak Complex, Main Road Sedam, Gulbarga Dist.

ಬರದ ಭೂಮಿಯಲ್ಲಿ ನಿಂಬೆಯ ಹೊನಲು

ನಿಂಬೆ ಬೇಸಾಯದಲ್ಲಿ ಎಲ್ಲರೂ ನಿಬ್ಬೆರಗಾಗುವ ಸಾಧನೆ ಮಾಡಿದವರು ಬಿ.ವಿ.ತಿಪ್ಪೇಸ್ವಾಮಿ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಬಿಜಿ ಕೆರೆ ಗ್ರಾಮದ ಅವರು ಓದಿದ್ದು ಬಿಎಸ್ಸಿ ಪದವಿ. ನಾನಾ ತರಹದ ಕೃಷಿಯ ಏಳು- ಬೀಳುಗಳನ್ನು ಕಂಡ ಅವರು ನಿಂಬೆ ಕೃಷಿಯಲ್ಲಿ ಅಗ್ರಗಣ್ಯರು.

ತಂದೆಯವರಿಂದ ಬಂದ ಆರು ಎಕರೆ ಭೂಮಿಯಲ್ಲಿ ಕೃಷಿ ಆರಂಭಿಸಿದ ತಿಪ್ಪೇಸ್ವಾಮಿ ಅವರು ಕೃಷಿಯ ಆದಾಯವನ್ನು ಅನಾವಶ್ಯಕ ಖರ್ಚು ಮಾಡದೇ ಭೂಮಿ ಖರೀದಿಸಲು ಬಳಸಿದರು. ಪರಿಣಾಮ ಕೆಲವೇ ವರ್ಷಗಳಲ್ಲಿ 60 ಎಕರೆ ಜಮೀನ್ದಾರರಾದರು.

ಶಿಕ್ಷ ಣ ಮುಗಿಸಿ ತಮ್ಮ 22ನೇ ವಯಸ್ಸಿನಲ್ಲಿ ಕೃಷಿಗಿಳಿದ ಇವರಿಗೆ ಸಾಗುವಳಿಯೇನೂ ಪರಿಚಿತವಾಗಿರಲಿಲ್ಲ. ತಂದೆಯ ಕೃಷಿ ದುಡಿಮೆ ಗೊತ್ತಿತ್ತು. ತರಕಾರಿ ಕೃಷಿ, ಈರುಳ್ಳಿ, ಜೋಳ, ರಾಗಿ ಹೀಗೆ ಹಲವು ಬೆಳೆ ವೈವಿಧ್ಯ ಕೃಷಿ ಅರಿತು ಕೊಂಡಿದ್ದರು. ಕೃಷಿ ಜವಾಬ್ದಾರಿ ಹಸ್ತಾಂತರವಾದಾಗ ಇವರು ಮೊದಲು ಮಾಡಿದ್ದು ಬೆಳೆ ಬದಲಾವಣೆ. ಬರದ ತಾಲೂಕಾಗಿದ್ದರಿಂದ ದಾಳಿಂಬೆ ಬೆಳೆದರೆ ಒಳ್ಳೆಯ ಗಳಿಕೆ ಸಾಧ್ಯವಿದೆ ಎಂದು ಎಲ್ಲರೂ ಆಡಿಕೊಳ್ಳುತ್ತಿದ್ದರು. ಹೀಗಾಗಿ ಅವರೂ ಗಿಡ ನಾಟಿ ಮಾಡಿದರು. ಉತ್ತಮ ಇಳುವರಿಯೂ ಬಂತು. ಆದರೆ, ವಿನಿಯೋಗಿಸಿದ ಶ್ರಮಕ್ಕೆ ಬರುವ ಪ್ರತಿಫಲ ಅಷ್ಟೇನೂ ಸಮಾಧಾನ ತರುತ್ತಿರಲಿಲ್ಲ. ತಿಪ್ಪೇಸ್ವಾಮಿ ಬೆಳೆ ಬದಲಿಸಲು ನಿರ್ಧರಿಸಿದರು. ಏಕ ಬೆಳೆಯಲ್ಲಿ ರೈತ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಅರಿತರು. ತಮ್ಮ ಹೊಲದಲ್ಲಿ ಸಂಚರಿಸುತ್ತಿದ್ದ ಅವರಿಗೆ ಬೆಳೆದು ನಿಂತಿದ್ದ ಮೂರು ನಿಂಬೆ ಗಿಡಗಳುಗೋಚರಿಸಿದವು. ಯಾರ ಆರೈಕೆಯ ನೆರವಿಲ್ಲದೆ ಅವು ತನ್ನಷ್ಟಕ್ಕೆ ತಾನು ಬೆಳೆಯುತ್ತಿರುವುದು ಅವರಿಗೆ ಕಂಡು ಬಂತು. ನಾಲ್ಕಾರು ವರ್ಷಗಳಲ್ಲಿ ಎತ್ತರಕ್ಕೇರಿದ, ಅಗಲಕ್ಕೆ ಹರಡಿದ ಗಿಡಗಳು ಭರ್ತಿ ಇಳುವರಿ ಹೊತ್ತು ನಿಂತಿದ್ದವು. ಮನೆಗೆ ಉಪ್ಪಿನಕಾಯಿಗೆಂದು ಬಳಸಿಯಾಯಿತು. ಸ್ನೇಹಿತರಿಗೆ ಬಂಧುಗಳಿಗೆ ಕಳುಹಿಸಿ ಕೊಟ್ಟದ್ದಾಯಿತು. ಕೂಲಿ ಕಾರ್ಮಿಕರಿಗೂ ಚೀಲಗಳಲ್ಲಿ ತುಂಬಿ ಕಳುಹಿಸಿದ್ದಾಯಿತು. ಆದಾಗ್ಯೂ ಗಿಡಗಳಲ್ಲಿನ ಹಣ್ಣುಗಳು ಖಾಲಿ ಯಾಗುತ್ತಿರಲಿಲ್ಲ. ಹಲವು ನೂರು ಹಣ್ಣುಗಳು ಹಾಗೆಯೇ ಜೋತು ಬಿದ್ದಿರುತ್ತಿದ್ದವು. ತನ್ನಷ್ಟಕ್ಕೆ ಉದುರಿಹಾಳಾಗುತ್ತಿದ್ದವು. ನೀರು ಹಾಯಿಸಲು ತೋಡಿದ ಕಾಲುವೆ ಮೇಲೆ ನಿಂತು ನಿಂಬೆ ಗಿಡಗಳನ್ನು ನೋಡತೊಡಗಿದ್ದ ತಿಪ್ಪೇಸ್ವಾಮಿಯವರು ಇನ್ನು ನಿಂಬೆ ಆರಂಭಿಸಬೇಕು ಎಂಬ ದೃಢ ನಿರ್ಧಾರ ಮಾಡಿದರು. ಮಾರುಕಟ್ಟೆಯಲ್ಲಿ ನಿಂಬೆಹಣ್ಣುಗಳಿರುವ ಬೇಡಿಕೆಯ ಬಗ್ಗೆ ಅಧ್ಯಯನ ಮಾಡಿದರು. ಬಹು ಬೇಡಿಕೆ ಇರುವುದು ಖಾತ್ರಿಯಾಯಿತು. ತಡ ಮಾಡದೆ ನಾಟಿ ಮಾಡಲು ಗಿಡಗಳನ್ನು ತರಿಸಿಕೊಂಡರು.

ಶುಭಾರಂಭ: ನಿಂಬೆ ಕೃಷಿ ಲಾಭದಾಯಕ ಅನ್ನಿಸಿದ ತಕ್ಷ ಣ ತಿಪ್ಪೇಸ್ವಾಮಿ ನಿಂಬೆ ಗಿಡಗಳನ್ನು ಖರೀದಿಸಿ ತಂದರು. ನಿಂಬೆ ಕೃಷಿಯ ಬಗ್ಗೆ ಮಾಹಿತಿಯೇ ಗೊತ್ತಿರದ ಇವರು ಮನಸ್ಸಿಗೆಸರಿ ಎನ್ನಿಸಿದ ಅಂತರದಲ್ಲಿ ಗಿಡಗಳನ್ನು ನಾಟಿ ಮಾಡಿದರು. ಗಿಡದಿಂದ ಗಿಡ ಹಾಗೂ ಸಾಲಿನ ನಡುವೆ ಹನ್ನೆರಡು ಅಡಿ ಅಂತರ ಕಾಯ್ದುಕೊಂಡರು. ಒಟ್ಟು 2,800ಗಿಡಗಳು ನಾಟಿಗೊಂಡವು. ನಿಂಬೆ ಇಳುವರಿ ಬರಲು ಮೂರು ವರ್ಷ ಕಾಯಬೇಕು. ಅಲ್ಲಿಯವರೆಗೆ ಆದಾಯವಿಲ್ಲದೆ ಬದುಕುವುದು ಕಷ್ಟ. ಅಂರ್ತ ಬೇಸಾಯ ಒಳಿತು ನಿರ್ಧರಿಸಿದರು. ನಿಂಬೆ ತೋಟದಲ್ಲಿ ಎಂಟು ಅಡಿಗೆ ಒಂದರಂತೆ ಹತ್ತು ಎಕರೆಯಲ್ಲಿ ಪಪ್ಪಾಯಿ ಗಿಡಗಳನ್ನು ನಾಟಿ ಮಾಡಿದರು. ಜೊತೆಗೆ ನುಗ್ಗೆ ಕೃಷಿಗೂ ಆದ್ಯತೆ ನೀಡಿದರು. ಪಪ್ಪಾಯ ಬೆಳೆ ಅಬ್ಬರಿಸಿ ಬಂತು. ಹತ್ತು ಎಕರೆಯಲ್ಲಿ ಒಂದು ಕಾಲು ಕೋಟಿ ರೂಪಾಯಿ ಗಳಿಕೆ ತಂದುಕೊಟ್ಟಿತ್ತು.

ಹತ್ತು ವರ್ಷಗಳ ಕಾಲ ರೇಷ್ಮೆ ಕೃಷಿ ಮಾಡಿದ್ದಾರೆ.ಇವರ ರೇಷ್ಮೆ ಕೃಷಿ ಪದ್ಧತಿಯನ್ನು ಅಧ್ಯಯನ ಮಾಡಿದ ರೇಷ್ಮೆ ಇಲಾಖೆ ಇವರನ್ನು ರಾಜ್ಯದ ರೇಷ್ಮೆ ಸಲಹಾ ಸಮಿತಿಯ ನಿರ್ದೇಶಕರನ್ನಾಗಿ ಆಯ್ಕೆ ಮಾಡಿತ್ತು. ರೇಷ್ಮೆ ಕೃಷಿ ಹೆಚ್ಚಿನ ಆಳುಗಳ ಕೆಲಸ ಬೇಡುತ್ತದೆ. ಕೂಲಿಯಾಳುಗಳ ಕೊರತೆಯ ನಡುವೆ ಈ ಕೃಷಿಯನ್ನು ನಿಭಾಯಿಸುವುದು ಕಷ್ಟ ಎನಿಸತೊಡಗಿತು. ಹತ್ತು ವರ್ಷಗಳ ಕಾಲ ರೇಷ್ಮೆ ಕೃಷಿ ಕೈಗೊಂಡು ನಂತರ ಕೈಬಿಟ್ಟರು. ಹಿಪ್ಪು ನೇರಳೆ ಬೆಳೆದ ಸ್ಥಳದಲ್ಲಿ ನಿಂಬೆ ತೋಟ ವಿಸ್ತರಿಸಿದರು.

ನಿಂಬೆ ಗಿಡಗಳು ನಾಟಿ ಮಾಡಿದ ಮೂರು ವರ್ಷಕ್ಕೆ ಇಳುವರಿ ನೀಡಲು ಆರಂಭಿಸುತ್ತದೆ. ಸುಲಭ ನಿರ್ವಹಣೆಯಿಂದ ಉತ್ತಮ ಇಳುವರಿ ಪಡೆಯಬಹುದು. ಗಿಡಗಳಿಗೆ ಡ್ರಿಪ್‌ ಮೂಲಕ ನೀರು ಹಾಯಿಸುತ್ತಾರೆ. ಗಿಡದ ಬುಡದಿಂದ ಮೂರು ಅಡಿ ಸುತ್ತಳತೆಯಲ್ಲಿ ಹನಿಹನಿಯಾಗಿ ನೀರು ಬೀಳುವಂತೆ ಮಾಡಿದ್ದಾರೆ. ಹನಿ ನೀರುಣ್ಣುವನಿಂಬೆ ಗಿಡಗಳು ಭರ್ತಿ ಫಸಲನ್ನು ಹೊತ್ತು ನಿಲ್ಲುತ್ತವೆ. ನಿಂಬೆಯಲ್ಲಿ ಕಸಿ ಕಟ್ಟಿದಗಿಡ ನಾಟಿ ಮಾಡಿದ್ದಾರೆ. ಅದರ ಆಯಸ್ಸು 8-10 ವರ್ಷ ಮಾತ್ರ. ಆದರೆ ಬೀಜದಿಂದ ತಯಾರಿಸಲ್ಪಟ್ಟ ಗಿಡಗಳಾಗಿದ್ದಲ್ಲಿ 35-40 ವರ್ಷದವರೆಗೆ ಇಳುವರಿ ಪಡೆಯಬಹುದು. ಕಷ್ಟಪಟ್ಟು ನಾಟಿ ಮಾಡಿದ ಗಿಡಗಳಿಂದ ಕೇವಲ 8-10 ವರ್ಷ ಇಳುವರಿಸಿಗುವುದಾದಲ್ಲಿಗೂಟಿ ಕಟ್ಟಿದ ಗಿಡವನ್ನೇಕೆ ಬಳಸಬೇಕು? ಬೀಜದಿಂದ ತಯಾರಿಸಿದ ಗಿಡವನ್ನೇ ಬಳಸಿದರೆ ಉತ್ತಮಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಕಾರಣದಿಂದಾಗಿಯೇ ನಿಂಬೆ ನರ್ಸರಿ ಆರಂಭಿಸಿ ಆಸಕ್ತ ರೈತರಿಗೆ ಗಿಡಗಳನ್ನು ನೀಡುತ್ತಿದ್ದಾರೆ.

ಭರ್ತಿ ಇಳುವರಿ: ತಿಪ್ಪೇಸ್ವಾಮಿಯವರ ಹೊಲದಲ್ಲೀಗಹೊಸದಾಗಿ ನಾಟಿ ಮಾಡಿದ ನಿಂಬೆ ಗಿಡಗಳ ಕೃಷಿ ತಾಕುವಿನಿಂದ ಹಿಡಿದು ಮೂವತ್ತು ವರ್ಷ ಆಯಸ್ಸಿನ ಗಿಡಗಳು ಇವೆ. ಗಿಡಗಳ ಆಯಸ್ಸಿನ ಗುಣವಾಗಿ ಇಳುವರಿ ಲಭ್ಯವಾಗುತ್ತದೆ. ಐದು ವರ್ಷ ಮೇಲ್ಪಟ್ಟ ಗಿಡಗಳಲ್ಲಿ ವರ್ಷಕ್ಕೆ ಸರಾಸರಿಐದು ಸಾವಿರ ಹಣ್ಣುಗಳನ್ನು ಪಡೆಯುತ್ತಿದ್ದಾರೆ. ಕೆಲ ಗಿಡಗಳು ಎಂಟು ಸಾವಿರಕ್ಕೂ ಹೆಚ್ಚು ಹಣ್ಣುಗಳನ್ನು ಕೊಯ್ಲಿಗೆ ಒದಗಿಸಿಕೊಡುತ್ತದೆ. ಸಾವಯವ ಕೃಷಿಯಾಗಿದ್ದರಿಂದ ಇವರು ಬೆಳೆದ ನಿಂಬೆ ಹಣ್ಣುಗಳಿಗೆ ಉತ್ತಮ ಬೇಡಿಕೆ ಇದೆ. ಕೊಯ್ಲು ಮಾಡಿದ ಒಂದು ವಾರದವರೆಗೂ ಹಣ್ಣುಗಳು ತನ್ನಮೂಲ ಹೊಳಪನ್ನು ಕಳೆದುಕೊಳ್ಳದೇ ತಾಜಾ ಹಣ್ಣಿನ ನೋಟವನ್ನು ಉಳಿಸಿಕೊಂಡಿರುತ್ತದೆ. ಪ್ರತಿ ಹಣ್ಣುಗಳನ್ನು ನಾಲ್ಕರಿಂದ ಐದು ರೂಪಾಯಿಗೆ ಮಾರಾಟ ಮಾಡುತ್ತಾರೆ. ಮಾರ್ಚಏಪ್ರಿಲ್‌ ತಿಂಗಳವೇಳೆಗೆ ಪ್ರತೀ ಹಣ್ಣುಗಳು ಆರು ರೂಪಾಯಿಗೆ ಒಂದರಂತೆ ಮಾರಾಟವಾಗುತ್ತದೆ. ಬೆಳೆದ ಹಣ್ಣುಗಳನ್ನು ಸ್ಥಳೀಯವಾಗಿ ಮಾರಾಟ ಮಾಡುವುದು ತೀರಾ ಅಪರೂಪ. ಬೆಂಗಳೂರು, ಅನಂತಪುರ, ರಾಮದುರ್ಗ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಮಂಗಳೂರು ಮಾರುಕಟ್ಟೆಗಳಿಗೆ ತಲುಪಿಸು ತ್ತಾರೆ. ವರ್ಷಪೂರ್ತಿ ಇಳುವರಿ ಪಡೆಯುತ್ತಾರೆ. ಗಿಡದ ಒಂದು ಭಾಗದಲ್ಲಿ ಹೂಗಳಿದ್ದಂತೆ ಇನ್ನೊಂದು ಭಾಗದಲ್ಲಿ ಕಾಯಿಗಳು ಬೆಳವಣಿಗೆ ಹಂತದಲ್ಲಿರುತ್ತದೆ. ಮಗದೊಂದು ಭಾಗದಲ್ಲಿಹೂವು ನೆರೆದಿರುತ್ತದೆ. ಹಣ್ಣು ಕೊಯ್ದತಕ್ಷ ಣ ಆ ಭಾಗದಲ್ಲಿ ಪುನಃ ಹೂವರಳಿ ನಿಲ್ಲಲು ಗಿಡ ಪ್ರಕ್ರಿಯೆ ಆರಂಭಿಸುತ್ತದೆ. ಪರಿಣಾಮಗಿಡಗಳಲ್ಲಿ ವರ್ಷಪೂರ್ತಿ ಹಣ್ಣುಗಳು ಕೊಯ್ಲಿಗೆ ಲಭ್ಯವಾಗುತ್ತದೆ.

ಗಿಡ ಕತ್ತರಿಸುವ ಅಗತ್ಯವಿಲ್ಲ: ನಿಂಬೆ ಗಿಡಗಳನ್ನು ಮಾರ್ಚ್‌ ಅಥವಾ ಏಪ್ರಿಲ್‌ ವೇಳೆಗೆ ಪೂ›ನಿಂಗ್‌ ಮಾಡಬೇಕು.ಮಳೆ ಬಿದ್ದಾಗ ಗಿಡಗಳು ನವ ಚೈತನ್ಯದಿಂದ ಚಿಗುರೊಡೆದು ಇಳುವರಿ ವೃದ್ಧಿಸಿಕೊಳ್ಳುತ್ತವೆ’ ಎನ್ನುವ ಸಾಮಾನ್ಯ ನಂಬಿಕೆನಿಂಬೆ ಬೆಳೆಗಾರರಲ್ಲಿದೆ. ಆದರೆ ಇದು ಸರಿಯಲ್ಲ. ನಿಂಬೆ ಗಿಡಗಳನ್ನು ಪೂ›ನಿಂಗ್‌ ಮಾಡುವ ಅಗತ್ಯವಿಲ್ಲ ಎನ್ನುತ್ತಾರೆ ತಿಪ್ಪೇಸ್ವಾಮಿ. ಮಾರ್ಚ್‌ ಏಪ್ರಿಲ್‌ ತಿಂಗಳ ವೇಳೆಗೆ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಿಂಬೆ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.

ಬಿರು ಬೇಸಿಗೆಯ ಸಮಯವಾಗಿದ್ದರಿಂದ ಸಹಜ ವಾಗಿಯೇ ಹೆಚ್ಚಿನ ದರವೂ ಸಿಗುತ್ತದೆ. ಆದರೆ ಇದೇ ಸಂದರ್ಭದಲ್ಲಿ ರೈತರು ಗಿಡಗಳನ್ನು ಪೂ›ನಿಂಗ್‌ ಮಾಡುವುದರಿಂದಉತ್ತಮ ದರ ಪಡೆಯಲು ಇರುವ ಒಂದು ಒಳ್ಳೆಯ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ನಿಂಬೆ ಹಣ್ಣುಗಳಿಗೆ ಉತ್ತಮ ಬೆಲೆ ಸಿಗುವ ಈ ಸಂದರ್ಭವನ್ನು ಯಾವುದೇ ಕಾರಣಕ್ಕೂ ನಾನು ಕಳೆದುಕೊಳ್ಳುವುದಿಲ್ಲ ಎನ್ನುತ್ತಾರೆ. ನಿಂಬೆ ಗಿಡಗಳು ಹದಿನೈದು ಅಡಿಗಳಷ್ಟು ಎತ್ತರಕ್ಕೆ ಬೆಳೆದು ನಿಲ್ಲುತ್ತವೆ. ಹತ್ತು ಅಡಿಗೂ ಹೆಚ್ಚು ಅಗಲವಾಗಿಹಬ್ಬುತ್ತವೆ. ಹೀಗಾದಾಗ ನಿಂಬೆಹಣ್ಣಿನ ಕೊಹ್ಲಿಗೆ ತೊಂದರೆಯಾಗುವುದು ಸಹಜ. ಮುಳ್ಳುಗಳ ನಡುವೆ ಬೆಳೆದಿರುವ ನಿಂಬೆ ಹಣ್ಣುಗಳನ್ನು ಕೊಯ್ಲು ಮಾಡಲು ಇವರು ಕಸರತ್ತು ಮಾಡುವುದಿಲ್ಲ. ತಾನಾಗಿಯೇ ಗಿಡದಿಂದ ಉದುರಿ ಬಿದ್ದಿರುವ ಹಣ್ಣುಗಳನ್ನು ಆಯ್ದು ಸಂಗ್ರಹಿಸಿ ಮಾರುಕಟ್ಟೆಗೆ ಒಯ್ಯುತ್ತಾರೆ. ಗಿಡವೊಂದರಿಂದ ಸರಾಸರಿ ದಿನನಿತ್ಯ ಹದಿನೈದರಿಂದ ಇಪ್ಪತ್ತು ಹಣ್ಣುಗಳು ಉದುರುತ್ತವೆ. ಐದು ಸಾವಿರಕ್ಕೂ ಅಧಿಕ ಗಿಡಗಳಿರುವುದರಿಂದ ಮಾರಾಟಕ್ಕೆ ದಿನನಿತ್ಯ ಒಯ್ಯುವ ಹಣ್ಣುಗಳ ಸಂಖ್ಯೆಹದಿನೈದು ಸಾವಿರ ಮೀರುತ್ತದೆ.

ಅಂತರ ಬೇಸಾಯ ಲಾಭಕರ: ಹೊಸದಾಗಿ ನಿಂಬೆ ಕೃಷಿ ಆರಂಭಿಸುವವರು ಗಿಡ ನಾಟಿಗೆ ಬೀಜದಿಂದ ತಯಾರಿಸಿದ ಗಿಡಗಳನ್ನು ಆಯ್ದುಕೊಳ್ಳುವುದು ಒಳ್ಳೆಯದು. ಮೇ ತಿಂಗಳ ಮೊದಲ ವಾರದಲ್ಲಿ ಗಿಡ ನಾಟಿ ಮಾಡಿದರೆ ಮಳೆ ನೀರಿನ ಬಲದಿಂದ ಉತ್ತಮವಾಗಿ ಬೆಳೆದು ನಿಲ್ಲುತ್ತದೆ. ಬೇಸಿಗೆಯಲ್ಲಿ ಗಿಡ ನೆಟ್ಟರೆ ಬೆಳೆಯುವ ಗಿಡಗಳಿಗೆ ನೀರು ಸಾಲದೆ ವಾತಾವರಣದ ಬಿಸಿಲಿಗೆ ಗಿಡ ಹೊಂದಿಕೊಳ್ಳದೆ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಇಳುವರಿಯಲ್ಲಿ ವ್ಯತ್ಯಯವಾಗುತ್ತದೆ. ಗಿಡಗಳ ಆಯಸ್ಸು ಕ್ಷಿಣಿಸುತ್ತದೆ. ಗಿಡ ಹಚ್ಚಿದ ನಂತರ ಬುಡವನ್ನು ಬಿಡಿಸಿಕೊಡಬೇಕು. ಒಣಗಿದ ಗೆಲ್ಲುಗಳನ್ನು ತೆಗೆದುಬಿಡಬೇಕು. ಗಿಡಗಳಿಂದ ಇಳುವರಿ ಪಡೆಯಲುಮೂರು ವರ್ಷ ಕಾಯಬೇಕು. ಈ ಸಂದರ್ಭ ಆ ಭೂಮಿಯಲ್ಲಿ ಉತ್ಪಾದನೆ ಪಡೆಯಲು ಅಂತರ ಬೇಸಾಯವಾಗಿ ಪಪ್ಪಾಯ, ನುಗ್ಗೆ ಕೃಷಿ ಮಾಡಿದರೆ ಉತ್ತಮ ಎನ್ನುತ್ತಾರೆ ತಿಪ್ಪೇಸ್ವಾಮಿ. ಕಳೆದ ವರ್ಷ ಹೊಸದಾಗಿ ನಾಟಿ ಮಾಡಿದ ನಾಲ್ಕು ಎಕರೆ ನಿಂಬೆ ತೋಟದಲ್ಲಿ ಒಂದು ಸಾವಿರ ಪಪ್ಪಾಯಿ ಗಿಡಗಳನ್ನು ನಾಟಿ ಮಾಡಿದ್ದಾರೆ. ಮುಂದಿನ ವರ್ಷ ಇಳುವರಿ ಕೊಯ್ಲಿಗೆ ಸಿಗಲಿದೆ.

ರಸಗೊಬ್ಬರ ಬಿಟ್ಟಿದ್ದೇಕೆ?:
 ಕೃಷಿ ಆರಂಭಿಸಿದ ಹೊಸದರಲ್ಲಿ ಎಲ್ಲರಂತೆ ರಾಸಾಯನಿಕ ಗೊಬ್ಬರವನ್ನು ಕೃಷಿಗೆ ಬಳಸುತ್ತಿದ್ದ ತಿಪ್ಪೇಸ್ವಾಮಿ ಅವರು ನಂತರ ಕೈಬಿಟ್ಟರು. ನೀರಿನ ಬರ, ಇರುವ ಕಡಿಮೆ ನೀರನ್ನೇ ಬೆಳೆಗೆ ಹಂಚಬೇಕು. ಪರಿಸ್ಥಿತಿ ಹೀಗಿದ್ದಾಗ ರಸಗೊಬ್ಬರ ನೀಡಿಬಿಟ್ಟರೆ ಹರಿಸಬೇಕಾದ ನೀರಿನ ಪ್ರಮಾಣ ಜಾಸ್ತಿ ಮಾಡಬೇಕಿತ್ತು. ಅಲ್ಲದೇ ವರ್ಷದಿಂದ ವರ್ಷಕ್ಕೆ ದೊರೆಯುವ ಫಸಲು ಕಡಿಮೆಯಾಗುತ್ತಿತ್ತು. ಮೊದಲೇ ಇವರ ಜಮೀನು ಕಲ್ಲುಗಳಿಂದ ತುಂಬಿದ್ದ ಭೂಮಿಯಾಗಿದ್ದರಿಂದ ಗಿಡಗಳ ಬೇರುಗಳು ಆಳಕ್ಕೆ ಇಳಿಯುತ್ತಿರಲಿಲ್ಲ. ಇದನ್ನು ಅರಿತುಕೊಂಡು ತಿಪ್ಪೇಸ್ವಾಮಿ ರಸಗೊಬ್ಬರ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ತಿಪ್ಪೆಗೊಬ್ಬರ, ಎರೆ ಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಗೊಬ್ಬರ ತಯಾರಿಗೆ ಅನುಕೂಲವಾಗಲು ಹಳ್ಳಿಕಾರ್‌ ಹಾಗೂ ಅಮೃತ್‌ ಮಹಲ್‌ ನಂತಹ ದೇಸಿಯ ತಳಿಯ ಮೂವತ್ತಕ್ಕೂ ಹೆಚ್ಚು ಜಾನುವಾರುಗಳನ್ನು ಸಾಕಿದ್ದಾರೆ. ಹತ್ತಕ್ಕೂ ಅಧಿಕ ಎರೆ ತೊಟ್ಟಿಗಳನ್ನು ಹೊಂದಿದ್ದು ತೊಟ್ಟಿಯಲ್ಲಿ ಸಗಣಿಯನ್ನು ತುಂಬಿಬಿಡುತ್ತಾರೆ. ಹುಳುಗಳು ಉತ್ತಮ ಎರೆಗೊಬ್ಬರವನ್ನು ತಯಾರಿಸಿ ಕೊಡುತ್ತವೆ ಇದನ್ನೇ ಗಿಡಗಳ ಬುಡಗಳಿಗೆ ಏರಿಸಿ ಬಿಡುತ್ತಾರೆ. ಅಲ್ಲದೆ ಎರೆ ಜಲದ ಟ್ಯಾಂಕ್‌ ಹೊಂದಿದ್ದು ಸಂಗ್ರಹವಾದ ಎರೆ ಜಲವನ್ನು ಗಿಡಗಳಿಗೆ ಸಿಂಪರಣೆಗೆ ಬಳಕೆ ಮಾಡುತ್ತಾರೆ.

Post Your Comment