ಬಿಸಿಲು ನಾಡಿನ ಹಲವು ರೈತರು ಕೃಷಿಯಲ್ಲಿ ಹೊಸತನ ಅಳವಡಿಸಿಕೊಂಡು ಯಶಸ್ಸು ಕಂಡಿದ್ದಾರೆ. ಅಂತಹದರಲ್ಲಿ ಈ ರೈತರೂ ಒಬ್ಬರು. ಕೇವಲ ಎರಡು ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆ ಬೆಳೆದು 7.22 ಲಕ್ಷ ರೂ. ಲಾಭ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ರೇಷ್ಮೆ ಬೆಳೆಯಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡು ರೈತರಿಗೆ ಮಾದರಿಯಾದ ಚಾಂದಸಾಬ್ ಮುಲ್ಲಾ ಆಳಂದ ತಾಲೂಕಿನ ಹಳ್ಳಿಸಲಗರ ಗ್ರಾಮದವರು. 2 ಎಕರೆ ಭೂಮಿಯಲ್ಲಿ 1.20 ಲಕ್ಷ ರೂ. ವೆಚ್ಚದಲ್ಲಿ ರೇಷ್ಮೆ ಬೆಳೆಯುವ ಮೂಲಕ ಕಲಬುರಗಿ
ಜಿಲ್ಲೆಗೆ 2ನೇ ಸ್ಥಾನ ಪಡೆದಿದ್ದಾರೆ. ಬೆಳೆ ಉತ್ಪಾದನೆ ಬಗ್ಗೆ ಇತರ ರೈತರಿಗೆ ಮಾಹಿತಿ ನೀಡುವ ಮಾರ್ಗದರ್ಶಕರಾಗಿರುವುದು ಮತ್ತೊಂದು ವಿಶೇಷ. ಬೆಂಗಳೂರಿನಲ್ಲಿ ಕೇಂದ್ರ ರೇಷ್ಮೆ ಮಂಡಳಿ ಮತ್ತು ರೇಷ್ಮೆ ಇಲಾಖೆ ಸಹಯೋಗದಲ್ಲಿ ನಡೆದ ರೇಷ್ಮೆ ಬೆಳೆಗಾರರ ಕಾರ್ಯಾಗಾರದಲ್ಲಿ ಚಾಂದಾಸಾಬ ಅವರಿಗೆ ಹೈದ್ರಾಬಾದ್ ಕರ್ನಾಟಕದ ಅತ್ಯುತ್ತಮ ರೇಷ್ಮೆ ಬೆಳೆಗಾರ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
2 ಎಕರೆಯಲ್ಲಿ ರೇಷ್ಮೆ : ಚಾಂದಸಾಬ ಮುಲ್ಲಾ ಅವರು ತಮ್ಮ ಹೊಲದಲ್ಲಿ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ಎರಡು ಎಕರೆಯಲ್ಲಿ ಹಿಪ್ಪೆನೇರಳೆ ಬೆಳೆಸಿದ್ದಾರೆ. ರೇಷ್ಮೆ ಇಲಾಖೆ ಸಹಾಯದಿಂದ 50 ್ಡ 20 ಅಳತೆಯ ಹುಳು ಸಾಕಾಣಿಕೆ ಮನೆ ನಿರ್ಮಿಸಿಕೊಂಡಿದ್ದಾರೆ. 1,400 ರೇಷ್ಮೆ ಮೊಟ್ಟೆಗಳಿಂದ 7.22 ಲಕ್ಷ ಆದಾಯ ತಮ್ಮದಾಗಿಸಿಕೊಂಡಿದ್ದಾರೆ. 2015-16ನೇ ಸಾಲಿನಲ್ಲಿ ಹೈದ್ರಾಬಾದ್ ಕರ್ನಾಟಕದಲ್ಲಿ ಈ ಸಾಧನೆ ಮಾಡಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. 2017-18 ಸಾಲಿನಲ್ಲಿ ರೇಷ್ಮೆ ಬೆಳೆಯಲ್ಲಿ ಮತ್ತಷ್ಟು ಆದಾಯ ಪಡೆದಿದ್ದಾರೆ.
ರೇಷ್ಮೆ ಹುಳುಗಳ ಆಹಾರವಾದ ಹಿಪ್ಪು ನೇರಳೆ ಬೆಳೆಗಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ಒಂದು ಗಿಡಕ್ಕೆ ಒಂದು ದಿನಕ್ಕೆ ಎರಡು ಲೀಟರ್ ನೀರು ಸಾಕು. ಹನಿ ನೀರಾವರಿ ಪದ್ಧತಿ ಹಿಪ್ಪುನೇರಳೆ ಬೆಳೆಗೆ ಅತಿ ಅವಶ್ಯ. ಸಾಂಪ್ರದಾಯಿಕ ನೀರಾವರಿ ಪದ್ಧತಿಗಿಂತ ಹನಿ ನೀರಾವರಿ ಅಳವಡಿಸಿಕೊಂಡರೆ ಹಿಪ್ಪುನೇರಳೆ ತೋಟಗಳಲ್ಲಿ ಶೇ.66ರಷ್ಟು ನೀರು ಉಳಿತಾಯ ಮಾಡಬಹುದು ಎಂದು ರೈತ ಚಾಂದಸಾಬ್ ಹೇಳುತ್ತಾರೆ.
ಹಿಪ್ಪು ನೇರಳೆ ಬೆಳೆಗೆ ತಿಪ್ಪೆಗೊಬ್ಬರ ನೀಡುವುದು ಮುಖ್ಯ. ಪ್ರತಿ ಎರಡನೇ ಕಂತಿನ ಬೆಳೆಗೆ ತಿಪ್ಪೆಗೊಬ್ಬರದ ಜತೆಗೆ 8 ಟನ್ ಕಬ್ಬಿನ ಪ್ರೆಸ್ ಮಡ್ ಮಿಶ್ರಣ ಮಾಡಿ ಬೆಳೆಗೆ ಹಾಕುತ್ತೇನೆ. ಪ್ರತಿ ಕಂತಿನ ಬೆಳೆಗೆ ಡಿಎಪಿ ಮತ್ತು ಯೂರಿಯಾ ತಲಾ 50 ಕಿಲೋ ಬಳಸುತ್ತೇನೆ. ಈಗಾಗಲೇ 6 ಲಕ್ಷ ಮೊಟ್ಟೆ ದೊರೆತಿದೆ. ಈಗ ಆರು ಬೆಳೆಗಳ ಲಾಭ ಬಂದಿದೆ. ಸುಮಾರು ರೂ.1.20 ಲಕ್ಷ ಖರ್ಚಾದರೆ ಒಟ್ಟು ರೂ. 7. 22 ಲಕ್ಷ ಆದಾಯ ತಂದು ಕೊಟ್ಟಿದೆ ಎನ್ನುತ್ತಾರೆ ಚಾಂದಸಾಬ್.