ಡಾ.ರಾಜಕುಮಾರ್ ಅವರ ‘ಬಂಗಾರದ ಮನುಷ್ಯ’ ಸಿನಿಮಾದ ಕತೆಯಂತೆ ಬಂಜರು ಭೂಮಿಯಲ್ಲಿ ಚಿನ್ನದ ಬೆಳೆ ಕಂಡ ಕತೆಯಿದು. ಹೀಗೆ ಬಂಡೆಯನ್ನೇ ಬದಲಿಸಿ ಕೃಷಿ ಮೂಲಕ ಬದಲಾವಣೆಯ ಹೆಜ್ಜೆ ಹಾಕಿದ್ದು ಬಾಗಲಕೋಟ ತಾಲೂಕಿನ ನೀರಲಕೇರಿ ಗ್ರಾಮದ ಅನುಸೂಯಾ ಕಾಖಂಡಕಿ.
ಈ ರೈತ ಮಹಿಳೆಯ ಶ್ರಮಕ್ಕೆ ಕಲ್ಲು ಕರಗಿದೆ, ಬರಡಾದ ಜಮೀನಿನಲ್ಲಿ ಬಂಗಾರದ ಬೆಳೆ ನಳನಳಿಸುತ್ತಿದೆ !
ಡಾ.ರಾಜಕುಮಾರ್ ಅವರ ‘ಬಂಗಾರದ ಮನುಷ್ಯ’ ಸಿನಿಮಾದ ಕತೆಯಂತೆ ಬಂಜರು ಭೂಮಿಯಲ್ಲಿ ಚಿನ್ನದ ಬೆಳೆ ಕಂಡ ಕತೆಯಿದು. ಹೀಗೆ ಬಂಡೆಯನ್ನೇ ಬದಲಿಸಿ ಕೃಷಿ ಮೂಲಕ ಬದಲಾವಣೆಯ ಹೆಜ್ಜೆ ಹಾಕಿದ್ದು ಬಾಗಲಕೋಟ ತಾಲೂಕಿನ ನೀರಲಕೇರಿ ಗ್ರಾಮದ ಅನುಸೂಯಾ ಕಾಖಂಡಕಿ.
ಎಲ್ಲವೂ ಉಂಟು: ಸಮರ್ಪಕ ನಿರ್ವಹಣೆ ಹಾಗೂ ಸಮಯೋಚಿತ ನಿರ್ಧಾರದಿಂದ ಲಾಭದಾಯಕ ಕೃಷಿಯನ್ನು ಹೇಗೆ ಮಾಡಬಹುದು ಎಂಬುದಕ್ಕೆ ಅನುಸೂಯಾ ಅವರ ಜಮೀನು ಉದಾಹರಣೆಯಾಗುತ್ತದೆ. ಒಟ್ಟು 7 ಎಕರೆ ವಿಸ್ತೀರ್ಣವಿರುವ ಜಮೀನಿನಲ್ಲಿ ಬಹು ಬೆಳೆಗಳನ್ನು ಬೆಳೆಯುವ ಮೂಲಕ ಲಾಭ ಗಳಿಸಿದ್ದಾರೆ. ಕಬ್ಬು ಬೆಳೆಯಾಗಿದ್ದರೆ, ಹೊಲದ ಸುತ್ತ 600 ತೆಂಗಿನ ಗಿಡ, ಸಾಗುವಾನಿ, ಪೇರಲ, ಸೀತಾಫಲ ಹಾಗೂ ಪಪ್ಪಾಯಿ ಗಿಡಗಳನ್ನು ಬೆಳೆಸಿದ್ದಾರೆ. 10 ವರ್ಷಗಳಿಂದ ಗೋವಿನಜೋಳ, ಹಿರೇಕಾಯಿ, ದಾಳಿಂಬೆಯನ್ನೂ ಬೆಳೆಯುತ್ತಿದ್ದಾರೆ. ಮಾರ್ಚ್, ಏಪ್ರಿಲ್ನಲ್ಲಿ ತರಕಾರಿಗೆ ಉತ್ತಮ ದರ ದೊರೆಯುವುದರಿಂದ ಹೀರೆಕಾಯಿ, ಸೌತೆ ಬೆಳೆದು ಮಾರುಕಟ್ಟೆಗೆ ಸಾಗಿಸಲಾಗುತ್ತದೆ. ಅಂದ ಹಾಗೆ ತರಕಾರಿಯನ್ನು ಮಧ್ಯವರ್ತಿಗಳಿಗೆ ಮಾರಾಟ ಮಾಡದೇ ಅನುಸೂಯಾ ಹಾಗೂ ಪತಿ ಶ್ರೀಶೈಲ ಅವರೇ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಇದರಿಂದ ನೇರವಾಗಿ ಲಾಭ ದೊರೆಯುತ್ತದೆ ಎಂಬುದು ಆಶಯ. ಇದೇ ಕಾರಣಕ್ಕಾಗಿ ಹಳೆಯ ಜೀಪ್ ಖರೀದಿಸಲಾಗಿದ್ದು, ಸಾಗಣೆಗೂ ಬಾಡಿಗೆ ನೀಡಬೇಕಿಲ್ಲ. ಕಬ್ಬಿನ
ಸಮೃದ್ಧ ಕಬ್ಬು : ಸಮರ್ಪಕ ನೀರಿನ ನಿರ್ವಹಣೆಯಿಂದ ಇವರ ಹೊಲದ ಕಬ್ಬು 16 ಫೂಟ್ವರೆಗೆ ಬೆಳೆದದ್ದೂ ಇದೆ. ಕೇವಲ 8 ತಿಂಗಳ ಅವಧಿಯಲ್ಲಿ ಕಬ್ಬು ಈ ಮಟ್ಟಕ್ಕೆ ಬೆಳೆದಿರುವುದು ಶ್ರಮದ ಸಾರ್ಥಕತೆ ತೋರಿಸುತ್ತದೆ. ರಾಸಾಯನಿಕಗಳ ಹಾವಳಿಯಿಂದ Üಸೋಲುವ ಬದಲು ಸಾವಯವ ಕೃಷಿ ಮಾಡುತ್ತಾರೆ. ತೋಟದಲ್ಲಿರುವ ಕೊಟ್ಟಿಗೆಯಲ್ಲಿರುವ ದನ, ಕರುಗಳ ಸಗಣಿಯಿಂದ ಗೊಬ್ಬರ ಮಾಡುತ್ತಾರೆ. ದನಗಳ ಮೂತ್ರವೇ ಸಾರಜನಕ, ರಂಜಕದಂತೆ ಕಾರ್ಯನಿರ್ವಹಿಸುತ್ತದೆ. ಪೋಟ್ಯಾಷ್ನ ಅವಶ್ಯಕತೆಯಿದೆ ಎನಿಸಿದಾಗ ಬೂದಿಯನ್ನು ಗೊಬ್ಬರವಾಗಿ ಬಳಸುತ್ತಾರೆ. ತೋಟದಲ್ಲಿರುವ 2 ಬೋರ್ವೆಲ್ಗಳ ಮೂಲಕ ಹನಿ ನೀರಾವರಿ ವ್ಯವಸ್ಥೆ ಮೂಲಕ ಎಲ್ಲ ಗಿಡಗಳಿಗೂ ನೀರು ತಲುಪುತ್ತದೆ. ಬಂಡೆಯ ಅವಶೇಷಗಳನ್ನು ಹೊಂದಿರುವ ತೋಟದಲ್ಲಿ ಅಲ್ಲಲ್ಲಿ ಬದುಗಳನ್ನು ನಿರ್ಮಿಸಲಾಗಿದೆ.
”ಮನೆಯವರೇ ಕೆಲಸ ಮಾಡಿದರೆ ಆಳುಗಳಿಗೆ ಸಂಬಳ ಕೊಡಬೇಕಿಲ್ಲ, ಇದು ಸಾಕಷ್ಟು ಹಣ ಉಳಿಸುತ್ತದೆ. ಇನ್ನು ಇದು ನಮ್ಮ ಜಮೀನು ಎನ್ನುವ ಅಭಿಮಾನ ಹೆಚ್ಚಾಗುತ್ತದೆ. ಇದೇ ಕಾರಣಕ್ಕೆ ನಮ್ಮ ಜಮೀನು ಹಸಿರಿನಿಂದ ನಳನಳಿಸುತ್ತಿದೆ” ಎಂದು ಖುಷಿಯಿಂದ ಹೇಳುತ್ತಾರೆ ಅನುಸೂಯಾ ಅವರ ಪತಿ ಶ್ರೀಶೈಲ. ಹೈನುಗಾರಿಕೆ ಕೈಗೊಂಡಿರುವ ದಂಪತಿ ಮನೆಗೆ ಸಾಕಾಗುವಷ್ಟು ಹಾಲು ಇಟ್ಟುಕೊಂಡು ಉಳಿದ ಹಾಲು ಮಾರಾಟ ಮಾಡುತ್ತಾರೆ.
ಸ್ವಾವಲಂಬಿ ಜೀವನ : ದಶಕದ ಹಿಂದೆ ಶ್ರೀಶೈಲ ಅವರು ಪಾಳು ಬಿದ್ದ ಜಮೀನು ಖರೀದಿಸಿದಾಗ ಜನ ಅಪಹಾಸ್ಯ ಮಾಡಿದ್ದರು. ಆದರೆ ಅನುಸೂಯಾ ಅವರಲ್ಲಿ ಹೊಲ ಅಗಾಧ ಅವಕಾಶ ಹೊಂದಿದೆ ಎಂಬ ಆತ್ಮವಿಶ್ವಾಸವಿತ್ತು. ಹೊಲದಲ್ಲಿದ್ದ ದೊಡ್ಡ ಬಂಡೆಗಲ್ಲನ್ನು ಹಿಟಾಚಿ ಯಂತ್ರಗಳಿಂದ ತೆಗೆದುಹಾಕುವ ಪ್ರಯತ್ನಕ್ಕೆ ಫಲ ದೊರೆಯಲಿಲ್ಲ. ನಂತರ ಸ್ಪೋಟಗೊಳಿಸುವ ಮೂಲಕ ಬಂಡೆಗಲ್ಲು ತೆಗೆದು ಹಾಕಲಾಯಿತು. ವಿಶೇಷವೆಂದರೆ ಈ ಬಂಡೆಗಲ್ಲಿನ ತುಂಡುಗಳು ಈಗ ತೋಟಕ್ಕೆ ಕಾಂಪೌಂಡ್ ಮಾದರಿಯಲ್ಲಿ ರಕ್ಷಣೆ ಒದಗಿಸಿವೆ.
ಹೊಲದಲ್ಲಿದ್ದ ಬಂಡೆಗಲ್ಲು ಸರಿಸಿದ ಖುಷಿಯಲ್ಲಿದ್ದ ಅನುಸೂಯಾ ಅವರಿಗೆ ಜಮೀನಿನ ಮಣ್ಣು ಸತ್ವ ಕಳೆದುಕೊಂಡಿರುವುದು ಗೊತ್ತಾಯಿತು. ಹೊಲಕ್ಕೆ ಮತ್ತಷ್ಟು ಫಲವತ್ತಾದ ಮಣ್ಣು ಬೇಕು ಎನಿಸಿತು. ಆಗ ಬಾಗಲಕೋಟದ ಮುಚಖಂಡಿ ಕೆರೆಯ ಮಣ್ಣು ತರಿಸಿ ಹೊಲಕ್ಕೆ ಹಾಕಿಸಿದರು. ‘ಹೊಲಕ್ಕ ಮಣ್ಣು ಹಾಕಾಕತ್ತೀರಿ’ ಎಂದು ಜನರು ನಕ್ಕಿದ್ದರು. ಛಲ ಬಿಡದ ಅನುಸೂಯಾ ಬ್ಯಾಂಕ್ನಿಂದ ಸಾಲ ಪಡೆದು ಕೃಷಿಗೆ ಮುಂದಾದರು. ಆ ಛಲವೇ ಈಗ ಪ್ರತಿ ವರ್ಷ ಅಂದಾಜು 20 ಲಕ್ಷ ರೂ. ಆದಾಯ ತಂದುಕೊಟ್ಟಿದೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯ, ಬಾಗಲಕೋಟದ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ವಿವಿ ವಿಜ್ಞಾನಿಗಳಿಂದ ಅನುಸೂಯಾ ಸದಾ ಮಾಹಿತಿ ಪಡೆಯುತ್ತಾರೆ. ಇವರ ಸಾಧನೆಗೆ ಯುವ ಕೃಷಿ ಮಹಿಳೆ ಪ್ರಶಸ್ತಿ ದೊರೆತಿದೆ. ಮನಸ್ಸು ಮಾಡಿದರೆ ಕಷಿಯಲ್ಲಿ ಏನಾದರೂ ಮಾಡಬಹುದು ಎಂಬುದಕ್ಕೆ ರೈತ ಮಹಿಳೆ ಅನುಸೂಯಾ ಸಾಕ್ಷಿ.