• +91 9448039075 / +91 9480576501
  • Deshak Complex, Main Road Sedam, Gulbarga Dist.

ಹೈನು ಪಾಲನೆಯಲ್ಲಿ ನೆಮ್ಮದಿ

ಜಾನ್‌ ಡಿಸೋಜ ಕುಂದಾಪುರ ಕರಾವಳಿ ಪ್ರದೇಶಕ್ಕೆ ಒಗ್ಗಲಾರವು ಎಂದು ಊಹಿಸಿದ್ದ ”ಎಚ್‌ಎಫ್‌” ಹಸುಗಳ ಯಶಸ್ವಿ ಪಾಲನೆ ಮಾಡಿ ಹೈನುಗಾರಿಕೆಯಲ್ಲಿ ಸೈ ಎನಿಸಿಕೊಂಡಿದ್ದಾರೆ ಕುಂದಾಪುರ …

ಕರಾವಳಿ ಪ್ರದೇಶಕ್ಕೆ ಒಗ್ಗಲಾರವು ಎಂದು ಊಹಿಸಿದ್ದ ”ಎಚ್‌ಎಫ್‌” ಹಸುಗಳ ಯಶಸ್ವಿ ಪಾಲನೆ ಮಾಡಿ ಹೈನುಗಾರಿಕೆಯಲ್ಲಿ ಸೈ ಎನಿಸಿಕೊಂಡಿದ್ದಾರೆ ಕುಂದಾಪುರ ತಾಲೂಕಿನ ಅಸೋಡು ಗ್ರಾಮದ ಪ್ರಗತಿಪರ ರೈತ ರವಿರಾಜ ಶೆಟ್ಟಿ.

”ಇಲ್ಲಿನ ಮಣ್ಣಿಗೆ ಎಚ್‌ಎಫ್‌ ಹಸು ಒಗ್ಗುವುದಿಲ್ಲ ಮಾರಾಯ…ನಿನಗೇಕೆ ಈ ಸಾಹಸ” ಎಂದು ಮೊದಲಿಸಿದವರೆಲ್ಲಾ ಈಗ ಗಪ್‌ಚುಪ್‌! 2 ವರ್ಷದ ಹಿಂದೆ ಕೋಲಾರದಿಂದ ಎಚ್‌ಎಫ್‌ ಹಸು ತಂದು ಸಾಕಣೆ ಆರಂಭಿಸಿದ ಅವರು ಈಗ 33 ಎಚ್‌ಎಫ್‌ ರಾಸುಗಳ ಒಡೆಯರು. ರವಿರಾಜ ಶೆಟ್ಟಿ ಅವರ ಎಚ್‌ಎಫ್‌ ಹಸುಗಳ ”ನಂದಿ ಡೈರಿ ಫಾರ್ಮ್‌” ಈಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದು.

ಸದ್ದಿಲ್ಲದ ಸಾಧಕ: 30 ಎಕರೆಗೂ ಅಧಿಕ ಕೃಷಿ ಭೂಮಿ ಹೊಂದಿರುವ ಶೆಟ್ಟಿ ವೈವಿಧ್ಯ ಕೃಷಿಯಲ್ಲಿ ನೆಮ್ಮದಿ ಕಂಡವರು. ಭತ್ತ, ಅಡಕೆ, ತೆಂಗು ಸೇರಿದಂತೆ ವಿವಿಧ ಜಾತಿಯ ಹಣ್ಣು, ಔಷಧೀಯ ಸಸ್ಯ ಸೇರಿದಂತೆ ಹತ್ತು ಹಲವು ಬಗೆಯ ಬೆಳೆ ಬೆಳೆಯುತ್ತಿದ್ದಾರೆ. ಸಂಪೂರ್ಣ ಸಾವಯವ ಕೃಷಿ ಪದ್ಧತಿ. ಮುಂಜಾನೆ 5 ಗಂಟೆಯಿಂದ ರಾತ್ರಿ 10ರ ತನಕ ಕೃಷಿಯಲ್ಲಿ ತೊಡಗುವ ಕಾಯಕಯೋಗಿ.

62ರ ವಯಸ್ಸಿನ ರವಿರಾಜ ಶೆಟ್ಟಿ ಬಿಎ ಪದವೀಧರರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ದಿ.ಸೌಕೂರು ನಾರಾಯಣ ಶೆಟ್ಟಿ ಅವರ ಪುತ್ರ. ಪದವಿ ನಂತರ ಕೃಷಿ ಆಸಕ್ತಿಯಿಂದ ಬೇರೆ ಉದ್ಯೋಗಕ್ಕೆ ಮರಳದೆ ಕೃಷಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. 30 ವರ್ಷಗಳಿಂದ ಕೃಷಿಯ ಜತೆಗೆ ಹೈನುಗಾರಿಕೆ ಮಾಡುತ್ತಿದ್ದಾರೆ.

ದೇಸಿ ಗೋವು ಸಾಕಣೆಯಲ್ಲಿ ಸಂತೃಪ್ತರಾಗಿದ್ದ ಅವರು ಎಚ್‌ಎಫ್‌ ಹಸುಗಳನ್ನು ಕಂಡು ಆಕರ್ಷಿತರಾದರು. ಸಹವರ್ತಿ ಹೈನುಗಾರರು ಎಚ್‌ಎಫ್‌ ತಳಿಯ ಹಸುಗಳು ಕರಾವಳಿಯ ವಾತಾವರಣಕ್ಕೆ ಒಗ್ಗಲಾರವು ಎಂದಿದ್ದರು. ಏನಾದರಾಗಲಿ ಎಚ್‌ಎಫ್‌ ಹಸು ಸಾಕಣೆ ಮಾಡುವುದೇ ಸರಿ ಎಂದು 2 ವರ್ಷದ ಹಿಂದೆ ಸಾಹಸಕ್ಕಿಳಿದರು. ಹಾಲ್ಸ್ವೀನ್‌ ಫ್ರೈಸಿಯನ್‌ ಎಂದು ಕರೆಯಲ್ಪಡುವ ಎಚ್‌ಎಫ್‌ ಹಸುಗಳು ದಿನಕ್ಕೆ 15ರಿಂದ 20ಲೀಟರ್‌ ಹಾಲು ನೀಡುತ್ತವೆ. 15 ಲೀಟರ್‌ ಹಾಲು ಕರೆಯುವ ಎಚ್‌ಎಫ್‌ ರಾಸುಗಳಿಗೆ 40ರಿಂದ 70 ಸಾವಿರ ರೂ. ಬೆಲೆಯಿದೆ. ಶೆಟ್ಟಿ ಅವರ ನಂದಿ ಡೈರಿ ಫಾರ್ಮ್‌ ನಲ್ಲಿ ಈಗ 20 ಎಚ್‌ಎಫ್‌ ಹಸು, 13 ಕರುಗಳಿವೆ.

ಕೃಷಿ, ಹೈನುಗಾರಿಕೆಯ ಸೊಬಗು: 30 ಎಕರೆ ಜಮೀನಿನ ಪೈಕಿ 20 ಎಕರೆಯಲ್ಲಿ ನಾನಾ ಬೆಳೆಗಳಿವೆ. ತೋಟದ ನಡುವೆ ಜೇನುಪೆಟ್ಟಿಗೆ ಇಟ್ಟಿದ್ದಾರೆ. ಕೋಕೋ, ನೆಲ್ಲಿ ಇನ್ನಿತರ ಸ್ಥಳೀಯ ಹಣ್ಣಿನ ಗಿಡಗಳಿವೆ. ಅಡಕೆಯೊಂದಿಗೆ ಕಾಳುಮೆಣಸು ಕೃಷಿ ಯಿದೆ. ಪಾರಿವಾಳ ಪ್ರಿಯರಾಗಿರುವ ಶೆಟ್ಟಿ ಅವರು ಹತ್ತಾರು ಪಾರಿವಾಳಗಳನ್ನೂ ಸಾಕಿದ್ದಾರೆ. 25 ಸಾವಿರ ಬಾಯ್ಲರ್‌ ಕೋಳಿಗಳ ಫಾರ್ಮ್‌ ಕೂಡ ಇದೆ. ಇವೆಲ್ಲಕ್ಕೂ ಭೂಷಣ ಎಂಬಂತೆ ಎಚ್‌ಎಫ್‌ ಹಸುಗಳ ಡೈರಿ. ಕೃಷಿ ಜಮೀನಿನಲ್ಲಿ 4 ತೆರೆದ ಬಾವಿ, ಬೋರ್‌ವೆಲ್‌ಗಳಿವೆ. ನೀರಿಗೆ ಬರವಿಲ್ಲ. ತಮ್ಮದೇ ಗದ್ದೆಯಲ್ಲಿ ಗೋವಿಗೆ ಮೇವು ಬೆಳೆಯುತ್ತಾರೆ.

ಸವಾಲು ನನಗಿಷ್ಟ: ”ಕೃಷಿಯೇ ನನ್ನ ಬದುಕು. ರಾಸಾಯನಿಕ ಮುಕ್ತ ಕೃಷಿಯಲ್ಲಿ ಯಶಸ್ಸು ಕಂಡಿದ್ದೇನೆ. ಕೋಳಿಗೊಬ್ಬರ, ಹಟ್ಟಿಗೊಬ್ಬರದಿಂದಲೇ ಕೃಷಿ ಮಾಡುತ್ತಿದ್ದೇನೆ” ಎನ್ನುತ್ತಾರೆ ಅವರು. ”ಊರ ತಳಿಯ ಜಾನುವಾರು ಸಾಕಣೆ ಮಾಡಿಕೊಂಡಿದ್ದೆ. ಒಮ್ಮೆ ಕೃಷಿ ಅಧ್ಯಯನ ನಿಮಿತ್ತ

ತೆರಳಿದಾಗ ಎಚ್‌ಎಫ್‌ ಹಸುಗಳ ಬಗ್ಗೆ ಮಾಹಿತಿ ಲಭಿಸಿತು. ವಿಶೇಷ ತಳಿಯ, ಬೃಹತ್‌ ಆಕಾರದಲ್ಲಿ ಬೆಳೆಯುವ ಎಚ್‌ಎಫ್‌ ತಳಿ ಹಸು ನಮ್ಮೂರಿನ ಹವಾಗುಣಕ್ಕೆ ಒಗ್ಗಲಾರವು ಎಂದು ತಜ್ಞರು, ನನ್ನೂರಿನ ಹೈನುಗಾರರು ಎಚ್ಚರಿಸಿದ್ದರು. ಏನಾದರಾಗಲಿ ಅವುಗಳನ್ನು ಪಾಲನೆ ಮಾಡಲೇಬೇಕು ಎಂಬ ಹಠಕ್ಕೆ ಬಿದ್ದು ಹಸು ಖರೀದಿ ಮಾಡಿದೆ. ಎಚ್‌ಎಫ್‌ ಹಸು ಸಾಕಣೆ ಚೆನ್ನಾಗಿಯೇ ಇದೆ” ಎಂದು ಮಾಹಿತಿ ನೀಡುತ್ತಾರೆ ಅವರು.

ಹೈನುಗಾರಿಕೆ ಲಾಭದಾಯಕವಾಗಲು ಪ್ರತಿ ಹಸು ವರ್ಷಕ್ಕೊಮ್ಮೆ ಕರು ಹಾಕುವಂತೆ ನೋಡಿಕೊಳ್ಳಬೇಕು. ಒಮ್ಮೆ ಕರು ಹಾಕಿದ ಹಸು ಮೂರು ತಿಂಗಳಿಗೆ ಪುನಃ ಗರ್ಭಧಾರಣೆ ಮಾಡುವಂತೆ ನೋಡಿಕೊಳ್ಳಬೇಕು. ಇದರಿಂದ ಹಾಲು ಸಿಗುವ ಪ್ರಮಾಣ ಸರಿಯಾಗಿರುತ್ತದೆ. ಕೃಷಿ ಅಥವಾ ಹೈನುಗಾರಿಕೆಯಲ್ಲಿ ಹೆಚ್ಚು ಸಾಲ ಮಾಡಬಾರದು. ಸಾಲ ಮಾಡಿದರೆ ಲಾಭದ ಪ್ರಮಾಣ ಕಡಿಮೆಯಾಗಿ ನಷ್ಟವಾಗುತ್ತದೆ ಎಂದು ಹೇಳುತ್ತಾರೆ ಅವರು.

ಹಸುಗಳಿಗೆ ಉತ್ತಮವಾದ ಹಸಿರು ಮೇವು ಬೇಕು ಎಂಬುದನ್ನು ಅವರು ಅರಿತಿದ್ದಾರೆ. ಹೀಗಾಗಿ 4 ಎಕರೆ ಗದ್ದೆಯಲ್ಲಿ ಕೊಟ್ಟಿಗೆ ಗೊಬ್ಬರ ನೀಡಿ ‘ಸಂಪೂರ್ಣ’ ತಳಿಯ ಮೇವು ಬೆಳೆಸುತ್ತಾರೆ. ಸಗಣಿ ಮತ್ತು ಸಗಣಿ ಗೊಬ್ಬರವನ್ನು ಅವರು ಸಾಗುವಳಿಗೆ ಬಳಸುತ್ತಾರೆ. ಹೆಚ್ಚಿಗೆಯಾದ ಸಗಣಿಯನ್ನು ಮಾತ್ರ ಮಾರಾಟ ಮಾಡುತ್ತಾರೆ.

ಪ್ರತಿದಿನ ನಂದಿ ಡೈರಿಯಿಂದ 300 ಲೀಟರ್‌ ಹಾಲು ಸಂಗ್ರಹವಾಗುತ್ತದೆ. ಹಾಲು ಕರೆಯಲು ಯಂತ್ರ ಅಳವಡಿಸಿದ್ದಾರೆ. ಎಚ್‌ಎಫ್‌ ತಳಿಯ ಒಂದು ಹಸುವಿನಿಂದ ದಿನಕ್ಕೆ ಸರಾಸರಿ 13 ಲೀಟರ್‌ ಹಾಲು ಸಿಗುತ್ತದೆ. ಲೀಟರ್‌ ಹಾಲಿಗೆ 31ರಿಂದ 32 ರೂಪಾಯಿ ದರದಲ್ಲಿ ಮಾರಾಟ ಮಾಡುತ್ತಾರೆ. ಜತೆಗೆ ಸರಕಾರ ಹಾಲಿಗೆ ನೀಡುವ ಪ್ರೋತ್ಸಾಹ ಧನ ಸಿಗುತ್ತದೆ.

”ನನ್ನ ವ್ಯವಸ್ಥೆಯಲ್ಲಿ ಒಂದು ಹಸುವಿನಿಂದ ದಿನಕ್ಕೆ ಸರಾಸರಿ 100 ರೂಪಾಯಿ ಆದಾಯ ಸಿಗುತ್ತದೆ. ಹಸುಗಳ ಆರೈಕೆಗೆ ಸಂಪೂರ್ಣ ಕಾರ್ಮಿಕರನ್ನು ಅವಲಂಬಿಸಬಾರದು. ಸ್ಥಳದಲ್ಲಿ ನಿಂತು ಉಸ್ತುವಾರಿ ನೋಡಿಕೊಳ್ಳಬೇಕು. ಹಸುಗಳಿಗೆ ಆರೋಗ್ಯ ಸಮಸ್ಯೆ ಬಂದಾಗ ಕೂಡಲೇ ಸೂಕ್ತ ಚಿಕಿತ್ಸೆ ಕೊಡಿಸಬೇಕು” ಎನ್ನುತ್ತಾರೆ ರವಿರಾಜ ಶೆಟ್ಟಿ.

ಹಸುಗಳ ಆರೋಗ್ಯ ಕೆಡಿಸುವ ಧಗೆ (ಅಧಿಕ ಉಷ್ಣಾಂಶ) ನಿವಾರಣೆಗೆ ಕೊಟ್ಟಿಗೆಯಲ್ಲಿ ಫ್ಯಾನ್‌ ಅಳವಡಿಸಿದ್ದಾರೆ. ಬೇಸಿಗೆಯಲ್ಲಿ ದೇಹ ತಂಪಾಗಿಸಲು ಸ್ಟ್ರಿಂಕ್ಲರ್‌ ವ್ಯವಸ್ಥೆಯೂ ಇದೆ. ಸುಖನಿದ್ದೆಗೆ ಮ್ಯಾಟ್‌, ಬಾಯಾರಿಕೆ ನೀಗಿಸಲು ನೀರು ನೀಡುವ ಸ್ಟೀಲ್‌ ತೊಟ್ಟಿಯಿದೆ. ಸಂಪೂರ್ಣ ಡೈರಿ ಪರಿಸರವನ್ನು ಸ್ವಚ್ಛ ವಾಗಿಟ್ಟುಕೊಂಡಿದ್ದಾರೆ.

ಮಾರುಕಟ್ಟೆಯಲ್ಲಿ ಸಿಗುವ ಪಶು ಆಹಾರವನ್ನು ಶೆಟ್ಟರು ಖರೀದಿಸಿ ಹಸುಗಳಿಗೆ ನೀಡುವುದಿಲ್ಲ. ಬದಲಾಗಿ ತಾವು ಸಾಕಿದ ಕೋಳಿ ಮತ್ತು ಹಸುಗಳಿಗೆ ಸ್ವತಃ ಆಹಾರ ತಯಾರಿಸುತ್ತಾರೆ. ಇದಕ್ಕೆ ಪ್ರತ್ಯೇಕ ಮಿಲ್‌ ನಿರ್ಮಿಸಿಕೊಂಡಿದ್ದಾರೆ. ಹಸುಗಳಿಗೆ ನೀಡುವ ಆಹಾರಕ್ಕೆ, ಜೋಳ, ಹೆಸರು ಭೂಸಾ, ಗೋಧಿ ಭೂಸಾ, ಕಡಲೆ ಹೊಟ್ಟು, ಸೋಯಾ, ಹತ್ತಿ ಕಾಳಿನ ಹಿಂಡಿ, ಶೇಂಗಾ ಹಿಂಡಿ, ಅಕ್ಕಿ ತವಡು, ಮಿನರಲ್‌ ಮಿಕ್ಶರ್‌, ಸೋಡಾ ಮತ್ತು ಉಪ್ಪನ್ನು ಸೇರಿಸುತ್ತಾರೆ. ಹಸುಗಳಿಗೆ ಗುಣಮಟ್ಟದ ಆಹಾರ ಸಿಗದೇ ಹೋದರೆ ಹಾಲು ಉತ್ಪಾದನೆ ಮತ್ತು ಗರ್ಭ ಧಾರಣೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸಮತೋಲಿತ ಮತ್ತು ಗುಣಮಟ್ಟದ ಆಹಾರ ನೀಡಬೇಕು ಎಂಬುದು ಅವರ ಸಲಹೆ.

Post Your Comment