• +91 9448039075 / +91 9480576501
  • Deshak Complex, Main Road Sedam, Gulbarga Dist.

1 ಎಕರೆ 365 ದಿನವೂ ಆದಾಯ

ಓದಿದ್ದು ಒಂಭತ್ತನೇ ತರಗತಿ ಮಣ್ಣಿನ ಮಗನಾಗುವ ಅವರ ಆಸೆಗೆ ಭೂತಾಯಿ ಆಸರೆಯಾಗಿದ್ದಾಳೆ ಯುವ ರೈತನ ಕೃಷಿ ಕನಸು ನನಸಾಗುತ್ತಿದೆ…

ಓದಿದ್ದು ಒಂಭತ್ತನೇ ತರಗತಿ. ಮಣ್ಣಿನ ಮಗನಾಗುವ ಅವರ ಆಸೆಗೆ ಭೂತಾಯಿ ಆಸರೆಯಾಗಿದ್ದಾಳೆ. ಯುವ ರೈತನ ಕೃಷಿ ಕನಸು ನನಸಾಗುತ್ತಿದೆ.


ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ತುಂಬರಗಿ ಗ್ರಾಮದ ಯುವ ರೈತ ಪುಂಡಲೀಕ ಸಾತೇರಪ್ಪ ಗಾವಣಕೇರ ಅವರ ಕೃಷಿ ವಿಭಿನ್ನ. ಆ ಗ್ರಾಮದ ರೈತರು ಹೆಚ್ಚಾಗಿ ಭತ್ತ ಮತ್ತು ಗೋವಿನಜೋಳ ಬೆಳೆಯುತ್ತಾರೆ. ಅದರೆ ಪುಂಡಲೀಕ ಗಾವಣಕೇರ ಒಂದು ಎಕರೆಯಲ್ಲಿ ಮಿಶ್ರ ಕೃಷಿ ಮಾಡಿ ಯಶಸ್ಸು ಕಂಡಿದ್ದಾರೆ.

ಪುಂಡಲೀಕ ಗಾವಣಕೇರ ಅವರದು ಬಡ ಕುಟುಂಬ. ಒಟ್ಟು ಎಂಟು ಜನ ಅಣ್ಣ ತಮ್ಮಂದಿರು. ಹೊಟ್ಟೆ ತುಂಬಿಸಿಕೊಳ್ಳಲು ದುಡಿಮೆ ಅನಿವಾರ್ಯ. ಅದಕ್ಕಾಗಿ ಉದ್ಯೋಗ ಅರಸಿಕೊಂಡು ಹೋಗಿದ್ದು ಬೆಂಗಳೂರಿನಲ್ಲಿ ಗಾರೆ ಕೆಲಸಕ್ಕೆ. ಸುಮಾರು 10-12 ವರ್ಷ ಬೆಂಗಳೂರಿನಲ್ಲಿ ದುಡಿದರು ಪುಂಡಲೀಕ. ಕಳೆದ ವರ್ಷ ಎಲ್ಲ ಅಣ್ಣ ತಮ್ಮಂದಿರು ತಮ್ಮ ತಮ್ಮ ಜಮೀನನ್ನು ಹಂಚಿಕೊಂಡರು. ಇವರ ಪಾಲಿಕೆ ಬಂದದ್ದು ಒಂದು ಎಕರೆ ಜಮೀನು. ನಗರ ಜೀವನದಿಂದ ಬೇಸತ್ತಿದ್ದ ಪುಂಡಲೀಕ ಪಾಲಿಗೆ ಬಂದ ಜಮೀನಿನಲ್ಲೇ ಏನಾದರೂ ಸಾಧಿಸಬೇಕು ಎನ್ನುವ ಛಲದಿಂದ ಹಳ್ಳಿಯ ಕಡೆ ಮುಖ ಮಾಡಿದರು. ಎಲ್ಲರೂ ಭತ್ತ, ಗೋವಿನಜೋಳ ಮಾಡುವುದನ್ನು ನೋಡಿ ತಾವೂ ಭತ್ತ ನಾಟಿ ಮಾಡಿದರು. ಆದರೆ, ಅಂದುಕೊಂಡ ಹಾಗೆ ಯಶಸ್ಸು ದೊರಕಲಿಲ್ಲ. ಏನು ಮಾಡುವುದೆಂದು ಯೋಚಿಸಿ ಮೊದಲು ಬೋರ್‌ವೆಲ್‌ ಕೊರೆಸಿ ಹನಿ ನೀರಾವರಿ ಅಳವಡಿಸಿಕೊಂಡರು. ಆಫ್ರಿಕನ್‌ ಮೂಲದ ಮಹಾಘನಿ ಮರದ ಬಗ್ಗೆ ಅಲ್ಪ ಸಲ್ಪ ತಿಳಿದು ಕೊಂಡಿದ್ದರು. ಮುಂಡಗೋಡಿನ ಕೃಷಿಕ ಮಹಾದೇಶ್ವರ ಲಿಂಗದಾಳ ಅವರನ್ನು ಸಂಪರ್ಕಿಸಿ ಆ ಮರದ ಬಗ್ಗ ಇನ್ನಷ್ಟು ತಿಳಿದುಕೊಂಡು ಮಹಾಘನಿ ಬೆಳೆಯಲು ಮುಂದಾದರು. ಹೊಲ ಸಮತಟ್ಟು ಮಾಡಿಕೊಂಡು ಜೆಸಿಬಿಯ ಮೂಲಕ ಗುಂಡಿ ತೆಗಿಸಿದರು. ಸಸಿಗಳನ್ನು ತಂದು ಗೊಬ್ಬರವನ್ನು ಹಾಕಿ ಒಂದು ಎಕರೆಯಲ್ಲಿ ಹತ್ತು ಅಡಿ ಅಂತರದಲ್ಲಿ 500 ಸಸಿಗಳನ್ನು ನಾಟಿ ಮಾಡಿದರು. ಇದಕ್ಕೆ ಆದ ಖರ್ಚು 1.60 ಲಕ್ಷ ರೂಪಾಯಿ. ನಿರಂತರವಾಗಿ ಆದಾಯ ಬಂದರೆ ಜೀವನ ಸಾಗಿಸುವುದು ಸುಲಭ ಎಂದು ಅರಿತ ಪುಂಡಲೀಕ, ಮಿಶ್ರ ಬೆಳೆ ಬೆಳೆಯಲು ಮುಂದಾದರು. ಅಂತರ ಬೆಳೆಯಾಗಿ ರೇಷ್ಮೆ, 50 ಕರಿಬೇವು, 100 ನಿಂಬೆ, 350 ನುಗ್ಗೆ, ಅಡಕೆ, ತೆಂಗು, ಪೇರಲ, ರೇಷ್ಮೆ ನರ್ಸರಿ, ದಾಳಿಂಬೆ ಹೀಗೆ ವಿವಿಧ ಬೆಳೆಗಳನ್ನು ಬೆಳೆದರು. ಒಂದೇ ವರ್ಷದಲ್ಲಿ ಇಡೀ ಊರಿನವರ ಚಿತ್ತ ಪುಂಡಲೀಕ ಗಾವಣಕೇರವರ ಹೊಲದತ್ತ!

ರೇಷ್ಮೆಯಿಂದ ಮೂರು ತಿಂಗಳಿಗೆ 40,000 ಸಾವಿರ, ನುಗ್ಗೆಯಿಂದ ವಾರಕ್ಕೆ 1200 ರಿಂದ 1300 ರೂ., ರೇಷ್ಮೆ ನರ್ಸರಿಯಿಂದ ವರ್ಷಕ್ಕೆ 75,000 ಸಾವಿರ ರೂ. ಆದಾಯ ಪಡೆದಿದ್ದಾರೆ. ರೇಷ್ಮೆ ನರ್ಸರಿಗೆ ಇಲಾಖೆಯಿಂದ 75,000 ರೂ ಅನುದಾನವೂ ದೊರಕಿದೆ. ತರಕಾರಿ ಬೆಳೆದು ಮಾರಾಟ ಮಾಡಿದ್ದರಿಂದ ವಾರ್ಷಿಕ 60,000 ರೂ. ಲಾಭ ಅವರಿಗೆ ಸಿಕ್ಕಿದೆ. ಹೊಲದಲ್ಲೇ ಸಣ್ಣ ಮನೆ ಮಾಡಿಕೊಂಡು ಅದರ ಸ್ವಲ್ಪ ಭಾಗದಲ್ಲಿ ಕೊಟ್ಟಿಗೆ ಮಾಡಿದ್ದಾರೆ. 5 ಕುರಿ ಸಾಕಣೆ ಮಾಡಿದ್ದು ಅದರಿಂದಲೂ ಆದಾಯ ಪಡೆಯುತ್ತಿರುವುದಾಗಿ ಮಾಹಿತಿ ನೀಡುತ್ತಾರೆ ಪುಂಡಲೀಕ ಗಾವಣಕೇರ.

ಪುಂಡಲೀಕ ಅವರು ಮಹಾಘನಿ ಸಸಿ ನೆಟ್ಟು ವರ್ಷವಾಗಿದೆ. ಇನ್ನು ನಾಲ್ಕು ವರ್ಷ ಕಳೆದರೆ ಆ ಮರದಿಂದ ಬೀಜಗಳು ಬರುತ್ತವೆ ಅವುಗಳನ್ನು ಮಾರಾಟ ಮಾಡಿ ಆದಾಯ ಪಡೆಯುವ ಚಿಂತನೆ ಈ ರೈತರದ್ದು. ಹತ್ತು ವರ್ಷಗಳಲ್ಲಿ ಮರ ಕಟಾವಿಗೆ ಬರುತ್ತದೆ. ಒಂದು ಮರ ದಿಂದ ಕನಿಷ್ಠ 25,000 ರೂ. ಆದಾಯ ಸಿಗುವ ನಿರೀಕ್ಷೆ ಅವರಿಗೆ.

Post Your Comment